ಹಾಡಿತೊಂದು ಕೋಗಿಲೆ ಮಧುರವಾಗಿ
ಕೇಳಿದ ಜನಸ್ತೋಮಕೆ ಗಾನ ಹಿತವಾಗಿ;
ಮನ ಹಿರಿ ಹಿರಿ ಹಿಗ್ಗಿ ನಲಿದಾಡಿತ್ತು.
ಕೋಗಿಲೆಗಳಲ್ಲೊಂದು ಪ್ರೇಮ ಪಲ್ಲವಿ
ನುಲಿದಿತ್ತು.. ವಾಹ್ಹ್ ವಾಹ್ಹ್.. ಪ್ರೇಮಾದ್ಭುತ!
ಬಯಸಿತ್ತು ಮನ.. ಪ್ರೀತಿಯ ಧ್ಯಾನ
ತನ್ನಲ್ಲಿಯೇ ಹುದುಗಿದ್ದ ಒಲವ ಮರೆತು.
ಗಾನದಲ್ಲಿ ಹದಗೊಂಡ ಕೋಗಿಲೆ
ಹಾಡಿತೊಂದು ಪ್ರೇಮದಾಚೆಗಿನ ಸತ್ಯ;
ಮರುಗಿತು ಮನ.. ಓ ಇದು ಹೌದೆಂದು!
ಸುಮ್ಮ ಸುಮ್ಮನೆ ಹಾಡಿತ್ತು ವೃಂದದಿ ಕೋಗಿಲೆ
ಎನ್ನ ದನಿಯ ಕೇಳುವವರಾರಿಲ್ಲವೆಂದು!
ಕೇಳಿಸಿಕೊಂಡು ಸುಮ್ಮನಾದರು ಎಲ್ಲರೂ
ಇದು ನಮ್ಮ ಪರಿಧಿಗೆ ಬರುವುದಿಲ್ಲವೆಂದು.
ಇಷ್ಟೆಲ್ಲ ಕೇಳಿದ ಕಿರಿ-ಮರಿ ಕೋಗಿಲೆ
ಅರ್ಥವಾಗಿಯೂ ಕೇಳಿತ್ತು; ಭಯಮಿಶ್ರಿತವಾಗಿ
ಪದ ಹುಟ್ಟಿವೆ.. ಕೆಲವರಿಗೆ ಹಿತವಲ್ಲದವು
ಹಾಡಬೇಕೋ.. ಬೇಡವೋ? ಎಂದು.
ಅಭಿವ್ಯಕ್ತಿ ಸ್ವಾತಂತ್ರ್ಯ ಸರ್ವಸ್ವತಂತ್ರ
ಹಾಡಿಕೋ... ಆದರೆ ನಿನಗಲ್ಲದೇ ಮತ್ತಾರಿಗೂ
ಕೇಳಿಸಬೇಡವೆಂದಿತು ಹಿರಿ ಕೋಗಿಲೆಯೊಂದು.
ಕರೆದೇಳಿತು ಒಳಿತಿಗಾಗಿ ಪಿಸು ಮಾತಿನಲಿ;
ಹಿತಮಿತವಾಗಿ ಹಾಡು.. ಹೊಗಳುಭಟ್ಟನಾಗು ನೀ..
ದೊರೆವುದು ನಿನ್ನ ಕೊರಳಿಗೆ ಪ್ರಶಸ್ತಿ ಸನ್ಮಾನಗಳ ಮಾಲೆ
ಹಿತವಲ್ಲದ ಮಿಥ್ಯವೂ ಅಲ್ಲದ ನಿಜ ನುಡಿಗಳನಾಡಬೇಡ
ಅದೆ ನಿನ್ನಯ ಕೊರಳನು ಕತ್ತರಿಸುವ ಕತ್ತಿ!
- ಅವಿನಾಶ್ ಕೆ.ಎನ್.