ಗುರುವಾರ, ಅಕ್ಟೋಬರ್ 13, 2016

ಕವಿ ಕೋಗಿಲೆಗಳ ಸಮಯ

ಹಾಡಿತೊಂದು ಕೋಗಿಲೆ ಮಧುರವಾಗಿ

ಕೇಳಿದ ಜನಸ್ತೋಮಕೆ ಗಾನ ಹಿತವಾಗಿ;

ಮನ ಹಿರಿ ಹಿರಿ ಹಿಗ್ಗಿ ನಲಿದಾಡಿತ್ತು.

 

ಕೋಗಿಲೆಗಳಲ್ಲೊಂದು ಪ್ರೇಮ ಪಲ್ಲವಿ

ನುಲಿದಿತ್ತು.. ವಾಹ್ಹ್ ವಾಹ್ಹ್.. ಪ್ರೇಮಾದ್ಭುತ!

ಬಯಸಿತ್ತು ಮನ.. ಪ್ರೀತಿಯ ಧ್ಯಾನ

ತನ್ನಲ್ಲಿಯೇ ಹುದುಗಿದ್ದ ಒಲವ ಮರೆತು.

 

ಗಾನದಲ್ಲಿ ಹದಗೊಂಡ ಕೋಗಿಲೆ

ಹಾಡಿತೊಂದು ಪ್ರೇಮದಾಚೆಗಿನ ಸತ್ಯ;

ಮರುಗಿತು ಮನ.. ಓ ಇದು ಹೌದೆಂದು!

 

ಸುಮ್ಮ ಸುಮ್ಮನೆ ಹಾಡಿತ್ತು ವೃಂದದಿ ಕೋಗಿಲೆ

ಎನ್ನ ದನಿಯ ಕೇಳುವವರಾರಿಲ್ಲವೆಂದು!

ಕೇಳಿಸಿಕೊಂಡು ಸುಮ್ಮನಾದರು ಎಲ್ಲರೂ

ಇದು ನಮ್ಮ ಪರಿಧಿಗೆ ಬರುವುದಿಲ್ಲವೆಂದು.

 

ಇಷ್ಟೆಲ್ಲ ಕೇಳಿದ ಕಿರಿ-ಮರಿ ಕೋಗಿಲೆ

ಅರ್ಥವಾಗಿಯೂ ಕೇಳಿತ್ತು; ಭಯಮಿಶ್ರಿತವಾಗಿ

ಪದ ಹುಟ್ಟಿವೆ.. ಕೆಲವರಿಗೆ ಹಿತವಲ್ಲದವು

ಹಾಡಬೇಕೋ.. ಬೇಡವೋ? ಎಂದು.

 

ಅಭಿವ್ಯಕ್ತಿ ಸ್ವಾತಂತ್ರ್ಯ ಸರ್ವಸ್ವತಂತ್ರ

ಹಾಡಿಕೋ... ಆದರೆ ನಿನಗಲ್ಲದೇ ಮತ್ತಾರಿಗೂ

ಕೇಳಿಸಬೇಡವೆಂದಿತು ಹಿರಿ ಕೋಗಿಲೆಯೊಂದು.

ಕರೆದೇಳಿತು ಒಳಿತಿಗಾಗಿ ಪಿಸು ಮಾತಿನಲಿ;

ಹಿತಮಿತವಾಗಿ ಹಾಡು.. ಹೊಗಳುಭಟ್ಟನಾಗು ನೀ..

ದೊರೆವುದು ನಿನ್ನ ಕೊರಳಿಗೆ ಪ್ರಶಸ್ತಿ ಸನ್ಮಾನಗಳ ಮಾಲೆ

ಹಿತವಲ್ಲದ ಮಿಥ್ಯವೂ ಅಲ್ಲದ ನಿಜ ನುಡಿಗಳನಾಡಬೇಡ

ಅದೆ ನಿನ್ನಯ ಕೊರಳನು ಕತ್ತರಿಸುವ ಕತ್ತಿ!

 

- ಅವಿನಾಶ್ ಕೆ.ಎನ್.

ಶುಕ್ರವಾರ, ಆಗಸ್ಟ್ 12, 2016

ಸಾಧನೆಗೈಯುವ ಛಲದಂಕ ಮಲ್ಲ

ಗೊತ್ತಿಲ್ಲ ಇವನ್ಯಾಕೆ ನಂಗೆ ಪದೆ ಪದೇ ಫೋನ್ ಮಾಡ್ತಾ ಇದ್ದಾನೆ ಅಂತಾ. ಹ್ಹಾ ಚೆನ್ನಾಗಿದ್ದೀನಿ ಭದ್ರಾವತಿಗೆ ಬಂದಾಗ ಸಿಕ್ತಿನಿ.. ಸ್ವಲ್ಪ ಕೆಲಸ ಇದೆ ಅಂತೇಳಿ ಫೋನ್ ಕಟ್ ಮಾಡ್ತಿದ್ದೆ. ಮತ್ತೆ ಒಂದ್ ವಾರದೊಳಗೆ ನಾಲ್ಕಾರ್ ಸಲ ಫೋನ್ ಮಾಡೋನು.. ಓ ಇವನು ಬಿಡೋಂಗೆ ಕಾಣ್ಸೊಲ್ಲ ನನ್ನ ಅಂತ ಅನ್ಕೊತ್ತಿದ್ದೆ. ಆದರೆ ಇವತ್ತು ಅವನನ್ನ ಬಿಡ್ ಬಾರದಪ್ಪ.. ಯಾವಾಗಲೂ ನಮ್ ಸ್ನೇಹ ಶಾಶ್ವತವಾಗಿ ಹೀಗೆ ಇರ್ಲಪ್ಪ ಅನ್ಕೋತೀನಿ.

ಯಾಕೆ ಈ ತಾತ್ಸಾರ ಮತ್ತೆ ಸ್ವಾರ್ಥ ಎರಡೂ ಹೇಳ್ತ ಇದ್ದೀನಿ ಗೊತ್ತಾ? ಅವನನ್ನ ತಿಳ್ ಕೊಳ್ಳೊದೇ ಇಲ್ದೊರು ಅವನ ಬಗ್ಗೆ ತಾತ್ಸಾರ ಮಾಡಬಹುದು.. ಆದರೆ ಅವನ ಸ್ನೇಹದಲ್ಲಿ ಇದ್ದೊರು ಇಂಥಾ ಗೆಳೆಯ ಯಾವಾಗ್ಲೂ ಇರಬೇಕಾಪ್ಪ ಅನ್ನೊ ಸ್ವಾರ್ಥ ಇಟ್ಕೊಂಡೋರು. ನಾನು ಕೂಡ ಈ ಚಲದಂಕ ಮಲ್ಲ ಮಾಲತೇಶನ ಸ್ನೇಹನ ಹೆಚ್ಚು ಬಯಸಿದ್ದೊರಲ್ಲಿ ಒಬ್ಬ.

ಛಲದಂಕ ಮಲ್ಲ ಅಂಥಾ ಏಕೆ ಕರಿತಿದ್ದೀನಿ ಅವನಿಗೆ ಅಂತಾ ಗೊತ್ತಾ? ಏನಾದ್ರೂ ಒಂದ್ ಅನ್ಕೊಂಡ್ರೆ, ಇದಾಗ್ ಬೇಕಾಪ್ಪ ಅಂತಾಂದ್ರೆ, ಏ ಆ ವಸ್ತು ನಾಳೆನೇ ನಾನ್ ತಗೋಬೇಕು ಅಂತಂದ್ರೆ... ಮರುದಿನ ಅದು ಅವನಾದಾಗಿರುತ್ತೆ. ಹೇ ಬಿಡು ಮಗಾ... ಏನ್ ಅಮ್ಮಮ್ಮಾ ಅಂದ್ರೆ ಸಾಲ ತಾನೇ ಆಗೋದು ಸಾವಲ್ವಲ್ಲ .. ಅಂಥ ಹಿಡಿದ ಕೆಲ್ಸಾನ, ಇಷ್ಟಪಟ್ಟ ವಸ್ತುನಾ ಅವನು ಅನ್ಕೊಂಡಾಗೆ ಮಾಡೋ ಛಲಗಾರ.

ಜೀವನದಲ್ಲಿ ಆನಂದ ಅನುಭವಿಸೋ ಟೈಮಲ್ಲಿ, ಬರೀ ಕಷ್ಟಗಳನ್ನೆ ಉಂಡು,  ಮನಸ್ಸನ್ನ ಹೆಬ್ಬಂಡೆ ಮಾಡ್ಕೊಂಡು ಎಲ್ಲ ತೊಂದರೆಗಳನ್ನ, ಸಮಸ್ಯೆಗಳನ್ನ, ಆರ್ಥಿಕ ಸಂಕಟಗಳನ ಎದುರಿಸುತ್ತಾ, ತನ್ನ ಕಷ್ಟನಾ ಯಾರಿಗೂ ತೋರಿಸ್ ಕೊಳ್ಳದೆ, ಸದಾ ಹುರುಪು, ಹುಮ್ಮಸ್ಸಿನ ಮಾತುಗಳನ್ನ ನಮ್ ಹತ್ರಾ ಹಂಚಿಕೊಳ್ಳೊ, ನನಗೆ ಮಾದರಿ ಎನಿಸೋ ನಮ್ ಮಾಲ್ತಿ ನಿಜವಾಗಲೂ ಧೈರ್ಯಶಾಲಿ.

ವೈಯುಕ್ತಿಕವಾಗಿ ತನ್ನ ಸಂಬಂದಿಕರು ಕೊಟ್ಟ ಕ್ವಾಟಲೆಗಳನ್ನ, ಕೆಲಸ ಪಡೆಯುವಾಗ ಅನುಭವಿಸಿದ ಯಾತನೆಗಳನ್ನ, ಜೀವನ ಒಂದ್ ಹಂತಕ್ಕೆ ಬಂದು ಗೃಹಾಸ್ಥ ಆಗುವಾಗ ಮಾತೃವಿಯೋಗದಿಂದ ನರಳಾಡಿದ ನೆನಪುಗಳನ್ನ, ಯಜಮಾನನಿಂದ ಬಡ್ತಿ ಪಡೆದು ತಂದೆ ಆಗೋ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಡ್ತಿ ತಡೆ ಹಿಡಿದ ತೊಳಲಾಟವನ್ನ.. ಆಪ್ತರ ಅನಾರೋಗ್ಯ ಸಮಸ್ಯೆಯಿಂದಾದ ಸಂಕಟವನ್ನ ತಾನೊಬ್ಬನೆ ಹೆಗಲು ಕೊಟ್ಟು ಅಷ್ಟೂ ಸಮಸ್ಯೆಗಳನ್ನ ಇಷ್ಟು ವರುಷ ಹೊತ್ತುಕೊಂಡು ಬರುತ್ತೀರುವ ಗೆಳೆಯ ಮಾಲತೇಶನ ಕಷ್ಟದ ಹೊರೆ ಕರಗಿ ಸುಖ ಸಂತೋಷದ ನೊರೆ ಜೀವನದಲಿ ಉಂಟಾಗಿ ನೆಮ್ಮದಿಯಿಂದ ಇನ್ನುಳಿದ ಕಾಲಗಳ ಕಳೆ... ಇದೋ ನಿನಗೆ ೨೮ ನೆಯ ವರುಷದ ಹುಟ್ಟು ಹಬ್ಬದ ಶುಭಾಶಯಗಳು..

ಬುಧವಾರ, ಆಗಸ್ಟ್ 10, 2016

ನನ್ನವ್ವನ ಲಾಲಿ ಹಾಡು


ಸೀರೆಯ ಜೋಳಿಗೆ ಕಟ್ಟಿ

ಮೆಲ್ಲನೆ ಎದೆಯ ತಟ್ಟಿ

ಲೋ... ಲೋ.. ಲಾಯಿ ಎಂದು

ಜಗವೇ ತೂಗೋ ಹಾಗೆ ಮೆಲ್ಲಗೆ ಪದವ ಹಾಡಿ

ಕದ್ದೊಯ್ದಳು ನನ್ನವ್ವ ನಿದ್ದೆಗೆ...

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಕಾಲೆರಡು ಮುಂದೆ ಚಾಚಿ

ನನ್ನೆದೆಯ ಪೂರ್ತಿ ಬಾಚಿ

ಅಂಗಾತ ಮಲಗಿಸಿ ಬೆಚ್ಚಗೆಯ ನೀರು ಹೋಯ್ದು

ಮೆತ್ತಗೆ ಬೆರಳ ಹಾಕಿ ಗಂಟಲ ಕಫವ ಕಿತ್ತು

ಸಾಮ್ರಾಣಿ ಹೊಗೆ ಬುಟ್ಟಿಗೆ ಹಾಕಿ

ಎನ್ನ ಮೈಯ ಮೆತ್ತಗೆ ಸೋಕಿ

ಲೋ.. ಲೋ.. ಲಾಯಿ ಎಂದು

ಗುಮ್ಮಣ್ಣ ಬಂದು ನಿನ್ನ ಹೊತ್ತುಕೊಂಡೋದಾನೊ

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಗಲ್ಲಕ್ಕೊಂದು ಹಣೆಗೊಂದು

ಕಪ್ಪನೆಯ ಕಾಡಿಗೆ ಇಟ್ಟು

ನೆತ್ತಿಗೆ ಹೊಕ್ಕಳಿಗೆ ಹಳ್ಳೆಣ್ಣೆ ತೊಟ್ಟು ಸುರಿದು

ತನ್ನೆರಡು ಕೈ ಮೇಲಕೆ ಎತ್ತಿ

ಅಡಿಯಿಂದ ಮುಡಿಯ ಸವರಿ

ಊರೋರ ಕೆಟ್ಟ ಕಣ್ಣು ತಾಗದಿರಲಿ ನಿನಗೆ ಎಂದು

ಲೊಟ ಲೊಟನೆ ನೊಟಕೆ ಮುರಿದು

ನನ್ನಪ್ಪಂಗೆ ನಂದೆ ದೃಷ್ಟಿ ತಾಕಿತೋ..

ತೋ ಬಿಡ್ತು ಅನ್ನು

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಊರ್ಸುತ್ತಾ ಕೂಲಿಯ ಮಾಡಿ

ನಾಕಾಸು ಹಣವ ಕೂಡಿ

ಗಂಜಿಗೆ ಬರ ಬಾರದಂತೆ ನೋಡಿ

ಹಬ್ಬಕೆ ಜಾತ್ರೇಲಿ ಹೊಸಬಟ್ಟೆ ತೊಡಿಸಿ

ಒಬ್ಬಟ್ಟು ಊರ್ಣ ತಿನಿಸಿ

ತನ್ನೊಟ್ಟೆಯ ಕಟ್ಟಿ ನನ್ನ ಖುಷಿಯ ನೋಡಿ

ತಾನಾನಂದವ ಪಟ್ಟಿ, ನೂರೊಂದು ಕನಸು ಕಟ್ಟಿ

ನಾನೊಂದು ಬಿಕ್ಷೆ ಬೇಡುವೆ ನಿನ್ನಲಿ

ನೀನೊಬ್ಬ ದೊಡ್ಡ ಮನುಷ್ಯನಾಗು

ಸಾಕೆನೆಗೆ ಸಾರ್ಥಕ ಬದುಕು ನಂದೆನುತ

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...


ರಚನೆ : ಅವಿನಾಶ್ (ಅವಿಕನ್ನಡಿಗ)

ಎತ್ತ ಸಾಗಿದೆ ನಮ್ಮ ನಾಡು

ಎತ್ತ ಸಾಗಿದೆ ನಮ್ಮ ನಾಡು

ಚೆಲುವ ಕನ್ನಡ ನಾಡು

ಎತ್ತೆತ್ತಲೋ ಸಾಗಿದೆ ಭವ್ಯ ಬೀಡು |

ಚಿತ್ತ ಹರಿಸುವವರಿಲ್ಲ; ಇತ್ತ ಸುಳಿವೂ ಇಲ್ಲ

ಬೆಟ್ಟಗುಡ್ಡ, ನದಿ, ಅಡವಿ ಭರಿದು ಮಾಡಿದರೆಲ್ಲ

ಇಂಚಿಂಚೂ ಬಿಡದೆ ನುಂಗುವರಲ್ಲ

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ವಾಯುವ್ಯಕೆ ಗೋವಾ; ಉತ್ತರದಿ ಮಹಾರಾಷ್ಟ್ರ

ಪೂರ್ವದಲಿ ಆಂಧ್ರ; ದಕ್ಷಿಣಕೆ ಕೇರಳ-ತಮಿಳುನಾಡು

ಚಿಂತೆಯಿಲ್ಲ ಸುತ್ತುವರೆದರೂ ಇಂತಿಪ್ಪ ಅನ್ಯರು |

ಚಿಂತೆಯೊಂದೆ.. ನಮಗೀಗ ನಮ್ಮೊಳಗೆ ನಮ್ಮವರು

ನುಂಗುವರು ಎಲ್ಲವನೂ ಬಾಕಸೂರರಂತೆ

ಒಂದಗುಳು ಬಿಡದೆ ಬಡಿದು ಬಾಯಿಗೆ ಹಾಕಿಕೊಂಡು

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ಹೋರಾಡುವರು ಕಿರುಚಾಡುವರು

ಗಡಿ ರಾಜ್ಯದಿ ಊರುಗಳೆಲ್ಲಾ ನಮಗೆ ಸೇರಬೇಕೆಂದೆನುತ

ನಾಡನು ರಕ್ಷಿಸಲೆಂದು ಸಂ ಕಟ್ಟಿ ನಿಂತವರು |

ಇತ್ತ ಗಮನಿಸುವುದಿಲ್ಲ ರೈತರ, ಬಡವರ

ಭೂಮಿ ಕಿತ್ತು ನುಂಗುವರನ್ನ.. ಏಕೆಂದರೆ

ನುಂಗುವರು ನಮ್ಮವರು ತಾನೇ? ಅಣ್ಣ-ತಮ್ಮಂದಿರು

ಎತ್ತ ಸಾಗಿದೆ ನಾ ಕಾಣೆ... ನನ್ನವ್ವನ ಆಣೆ ||

 

ಹೋರಾಡಿದರು ಆಗಿನವರು ಏಕೀಕರಣಕೆ

ಕರ್ನಾಟಕ ಒಂದುಗೂಡಲೆಂದು

ಹೋರಾಡುವರು ಈಗಿನವರು ವರ್ಗೀಕರಣಕೆ

ಕರ್ನಾಟಕ ಯಾವುದೆಂದು |

ಸುಮ್ಮನೆ ಸತ್ತಂತಿರುವವರು ಪ್ರಜಾಪಾಲಕರು

ಯಾಕಪ್ಪಾ ಬೇಕು? ನಾಡಿನ ಚಿಂತೆ

ಬೇಕೊಂದೆ ಅವರುಗಳಿಗೆ ಅಸೆಂಬ್ಲಿ ಸಂತೆ

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ದೋಚುತಿರುವರು ನಾಡನು ಕೊಳ್ಳೆ ಹೊಡೆದು

ಇವರ ದಾಹ ತಣಿಯುವುದಿಲ್ಲ

ತಿದ್ದುವರಿಲ್ಲ; ಚಾಟಿಯ ಬೀಸುವವರಿಲ್ಲ |

ಲೇಖನಿಲಿ ಚುಚ್ಚಿ ಕೊಲೆಗೈಯಬೇಕು ಇಂಥವರನು

ಅದಕ್ಕಾಗಿ ಮತ್ತೊಮ್ಮೆ ಹುಟ್ಟಿಬರಬೇಕು

ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ ಮಾಸ್ತರರು

ಎತ್ತ ಸಾಗಿದೆ ಅವ್ವ ಭುವನಮಾತೆ.. ನೀನೆಲ್ಲಿರುವೆಯೋ ನಾ ಕಾಣೆ ||

ರಚನೆ : ಅವಿನಾಶ್ (ಅವಿಕನ್ನಡಿಗ)

 

ಮಂಗಳವಾರ, ಆಗಸ್ಟ್ 9, 2016

ರಕ್ಷಿಸುವ ಕಸವ ಲಕ್ಷ್ಯಿಸುವವರಾರು?



ಉಪಯೋಗಿಸಿ ಬಿಸಾಡುವ ಮುನ್ನ
ತಿಂದುಳಿಸುವ ಬೇಡದ ಶೇಷವನ್ನ
ಬೆಲೆ ಕೊಡುವರು.. ಇವೆಲ್ಲಕೂ ಮುನ್ನ;
ಇದು ಹೊಸತ? ತಾಜಾವುಂಟಾ?
ಬಿಸಿ ಇಲ್ಲವಾ? ರುಚಿ ಇದೆಯಾ?
ಬೇರೆ ಬಣ್ಣವಿಲ್ಲವಾ? ಎಂದು.

ನಿನ್ನ ಬಗ್ಗೆ ಕಾಳಜಿಯೊ, ಜಾಗೃತವೋ ನಾ ಕಾಣೆ!
ಆದರೆ.. ನೀ ಉಪಯೋಗವಾದ ನಂತರ;
ಯಾರು ನೆನೆಯುವರು ನಿನ್ನ? ಕ್ಷಣಾರ್ಧದಲಿ
ನೀ ಬರೀ ಕೊಳಕು, ಅಸಹ್ಯ.
ನಿನ್ನ ಮುಟ್ಟಿದರೆ ತೊಳೆದುಕೊಳ್ಳುವರು
ತಮ್ಮ ಮೈ-ಕೈಗಳನ್ನ.
ನಿನ್ನ ಕಂಡರೆ ಮೂಗು ಮುಚ್ಚುವರು
ಗಬ್ಬುನಾಥ! ಎಂದು ಬೈದುಕೊಂಡು.
ನಿನ್ನ ರೂಪಕೆ, ರುಚಿಗೆ ಹೊಗಳಿದರು
ನೀ ಹಾಳಾಗುವ ಮುನ್ನ.
ಉಗುಳಿದರು ಕ್ಯಾಕರಿಸಿ ತುಪಕ್ಕನೆಂದು
ನೀ ಬೇಡವೆಂದು ದೂಡಿದ ಮೇಲೆ.
ಜೋಪಾನ ಮಾಡುವರು ತಮ್ಮ ಮಗುವನು
ಸಂತೈಸಿ ಹಾರೈಸಿದಂತೆ... ನಿನ್ನ ತಿಂದು ಉಡುವ ಮುನ್ನ.
ಉಟ್ಟು ತಿಂದಾದಮೇಲೆ ನೀನ್ಯಾರಿಗೆ ಬೇಕೇಳು?
ಪುಟ್ಟಿಯಲಿ ಬಂದ ನೀನು, ಕೊನೆಗೆ
ಬೀಳುವೆ ರಸ್ತೆ ಬದಿಯ ತೊಟ್ಟಿಯಲಿ!

ನೀ ಬಂದರೆ ನಾವೆಲ್ಲಾ ನಶಿಸುತ್ತೇವೆ,
ನಿನಗುಳಿದುಕೊಳ್ಳಲು ಅಲ್ಪಜಾಗವೂ ಬಿಡೇವೆಂದು;
ಸೀಮೆಣ್ಣೆ ಸುರಿದುಕೊಂಡು ವಿಷವ ಕುಡಿದು
ಪ್ರತಿಭಟಿಸುವರು ನಿನ್ನ ಬರುವಿಕೆಗೆ ಪಟ್ಟಣದ ಪಕ್ಕದ ಜನ.
ನಿನ್ನ ಇರುವಿಕೆಯೆ ದೊಡ್ಡ ಸಮಸ್ಯೆ
ಬೃಹತ್ ಮಹಾನಗರ ಪಾಲಿಕೆಗೆ!
ದಿನ ನಿತ್ಯ ಸದನದಲಿ ನಿನ್ನದೇ ಮಾತು;
ಆರೋಪ ಪ್ರತ್ಯಾರೋಪ ಆಡಳಿತ ವಿರೋಧ ಪಕ್ಷಗಳ ಮಧ್ಯೆ
ನಿನ್ನಯ ನಿರ್ವಹಣೆಯೆ ಇವರ ಕಚ್ಚಾಟಕ್ಕೆ ದಾರಿ.

ತಿಂದೊಗೆದ ಮನುಜ ನಿನಗೆ ಇಷ್ಟೆಲ್ಲಾ
ನೋವು ನಿಂದನೆಯನು ಕೊಟ್ಟರೂ
ಒಂದನಿಯ ಕಣ್ಣೀರು ಸುರಿಸದೆ ಪ್ರತಿಫಲವಾಗಿ ನೀ ನಮಗೆ
ಗೊಬ್ಬರವಾದೆ, ಇಂಧನವಾದೆ, ಇನ್ನೂ ಕೆಲವೆಡೆ ಚಳಿಗೆ
ಬೆಚ್ಚಗೆನೆಯ ಬೆಂಕಿಯಾದೆ. ಬೀದಿಯಲಿ ಹಾಯುವ ಬಡವರಿಗೆ
ಬದುಕುವ ದಾರಿಯಾದೆ.
ಸಣ್ಣ ಕೈಗಾರಿಕೆಗಳಿಗೆ ಕೆಲಸ ನೀಡುವ ಕಚ್ಚಾಸಾಮಗ್ರಿಯಾದೆ!!
ನನ್ನದೊಂದು ವಿನಮ್ರತೆಯ ಮನವಿ ಕೊನೆಯದಾಗಿ
ಪರರ ಸುಖದೊಳಗೆ ಆನಂದ ಪಡುವ
ನಿನ್ನ ಸತ್ಫಲವ ನೆನಯಲಿ;
ಬಯ್ಯುವರು, ಉಗುಳುವವರು ಮೊದಲು ತಿಳಿದುಕೊಳ್ಳಲಿ-

ಜಾಣ್ಮೆಯಲಿ ಉಪಯೋಗಿಸುವುದು ಹೇಗೆ ನಿನ್ನ?

ರಚನೆ : ಅವಿನಾಶ್‍ (ಅವಿಕನ್ನಡಿಗ)




ಸೋಮವಾರ, ಆಗಸ್ಟ್ 8, 2016

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಟಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.ಇವು ಕನ್ನಡಿಗರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.ಕನ್ನಡದ ಪುಸ್ತಕಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಏಕೈಕ ಸ್ಥಳ ಕನ್ನಡ ಸಾಹಿತ್ಯ ಸಮ್ಮೇಳನಗಳು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನಾಡಿನ ಹಿರಿಯ ಸಾಹಿತಿಗಳಿಗೆ ದೊರೆಯುವ ಅತ್ಯುನ್ನತ ಗೌರವ.ಇದೇ ಮಾದರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು,ತಾಲ್ಲೂಕು ಹಾಗೂ ಹೋಬಳಿ ಸಾಹಿತ್ಯ ಸಮ್ಮೇಳನಗಳು ಜರುಗುತ್ತಿವೆ.ಕರ್ನಾಟಕದ ೫ ಗಡಿ ರಾಜ್ಯಗಳಲ್ಲಿ ಗಡಿನಾಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ವಿಶೇಷ ಅಂಶವಾಗಿದೆ.ಇದಲ್ಲದೆ ಮಕ್ಕಳ ಸಾಹಿತ್ಯ ಸಮಾವೇಶ,ಜಾನಪದ ಸಮಾವೇಶ,ಹಾಗೂ ದಲಿತ ಮತ್ತು ಬಂಡಾಯ ಸಮಾವೇಶಗಳು ಇನ್ನೂ ಮೊದಲಾದ ಸಾಹಿತ್ಯಕ ಸಮಾವೇಶಗಳನ್ನು ಕಮ್ಮಟಗಳನ್ನು ನಡೆಸಲಾಗುತ್ತಿದೆ. 

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್ ಸೈಟ್ ನೋಡಿ

http://kasapa.in/sahithyasammelana_pre.htm

ಮೇಕೆದಾಟು - ವಿಹಾರ - ವಿವಾದ


'ಮೇಕೆದಾಟು ವಿಹಾರಸ್ಥಳ, ಬೆಂಗಳೂರಿನಿಂದ ೯೦ ಕಿ. ಮೀ. ದೂರದಲ್ಲಿದೆ. ಕನ್ನಡ ಭಾಷೆಯಲ್ಲಿ, ಮೇಕೆ ಹಾರುವಷ್ಟು ಸ್ಥಳ. ಕಾವೇರಿನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿದಾಟುವಷ್ಟು ಜಾಗಮಾತ್ರ. ಕಾವೇರಿ-ಅರ್ಕಾವತಿ ನದಿಯ ಸಂಗಮದ ಹತ್ತಿರದ ವರೆಗೆ ಕಾರ್-ಡ್ರೈವ್ ಮಾಡಿಹೋಗಬಹುದು. ಇದರ ನಂತರ, ನದಿಯನ್ನು 'ತೆಪ್ಪ,' ದಲ್ಲಿ ದಾಟಬಹುದು. ನೀರು ಆಳವಿಲ್ಲದಿದ್ದರೆ ನಡೆದೇ ಹೋಗಬಹುದು. ಇಲ್ಲಿಂದ ಮೇಕೆದಾಟು ೪ ಕಿ. ಮೀ ದೂರವಿದೆ. ಮೇಕೆದಾಟು ನ ವರೆಗೆ, ಹೋಗಲು ಕೇವಲ ೧ ಬಸ್ ಇದೆ. 'ಮಾನ್ಸೂನ್,' ಸಮಯದಲ್ಲಿ ಅಲ್ಲಿನ ಬಂಡೆಗಳಮೇಲೆ ಹತ್ತಲು ಬಹಳ ಕಷ್ಟ. ಜಾರುತ್ತವೆ. ಮತ್ತೊಂದು ಫಾಲ್ಸ್ 'ಚುಂಚಿ ಜಲಪಾತ,' ಹತ್ತಿರದಲ್ಲಿದೆ. ಸಂಗಮದ ಹತ್ತಿರದಿಂದ ಸ್ವಲ್ಪ ಬೇರೆದಿಕ್ಕಿಗೆ, ಹೋಗಬೇಕು.
ಮಳೆಗಾಲದ ಬಳಿಕ, ಆಗಸ್ಟ್ ನಿಂದ ಜನವರಿ ತಿಂಗಳಿನಲ್ಲಿ ಅತ್ಯಂತ ಸರಿಯಾದ ಸಮಯ. ಊಟ ಮತ್ತು ವಸತಿಯ ವ್ಯವಸ್ಥೆಗಳಿಲ್ಲ. ಬೆಳಿಗ್ಯೆ ಬಂದು ರಾತ್ರಿಯವರೆಗಿದ್ದು ಮತ್ತೆ ವಾಪಸ್ ಹೋಗಬೇಕು. ಊಟವನ್ನು ಕಟ್ಟಿಸಿಕೊಂಡು ಬರುವುದು ಒಳ್ಳೆಯದು. ಯಾವ 'ರೆಸ್ಟೋರೆಂಟ್,' ಅಥವಾ 'ಖಾನಾವಳಿ,' ಗಳಿಲ್ಲ. ಕೆಲವು ಅಂಗಡಿಗಳು, ಕೇವಲ 'ಕೂಲ್ ಡ್ರಿಂಕ್ಸ್' ಮತ್ತು 'ಸ್ನಾಕ್ಸ್,' ಗಳನ್ನು ಮಾತ್ರ, ಸರಬರಾಜು ಮಾಡುತ್ತವೆ. ಅದ್ದರಿಂದ ಪರ್ಯಟಕರು ತಮ್ಮ ಊಟವನ್ನು ತಾವೇ ತೆಗೆದುಕೊಂಡು ಹೋಗಿ, ಅದೇ ದಿನದ ರಾತ್ರಿ ವಾಪಸ್ ಆಗಬೇಕಾಗುತ್ತದೆ.

ಮೇಕೆದಾಟು ಅಣೆಕಟ್ಟು ಯೋಜನೆ ಮತ್ತು ವಿವಾದ :
ಕೇರಳ, ಕರ್ನಾ­ಟಕ, ತಮಿಳುನಾಡು ಮತ್ತು ಪುದುಚೇರಿಗಳ ನಡುವೆ, ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬಹಳ ಹಿಂದಿನಿಂದಲೂ ವಿವಾದ ನಡೆಯುತ್ತಲೇ ಇದೆ. ಅದರಲ್ಲೂ ಕರ್ನಾಟಕ ಮತ್ತು ತಮಿಳು­ನಾಡಿನ ಮಧ್ಯೆ ಕಗ್ಗಂಟು ಬಿಗಡಾಯಿಸಿದ ಸ್ಥಿತಿಯಲ್ಲೇ ಇದೆ.
ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ.
ನ್ಯಾಯಮಂಡಳಿ ತಗ್ಗು ಪ್ರದೇಶಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕರ್ನಾಟಕ ತನ್ನ ಸ್ವಂತ ನಿರ್ಧಾರದ ಮೇಲೆ ಜಲ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.
೪೯.೪೫೨ ಟಿಎಂಸಿ ಅಡಿ ಶೇಖರಣಾ ಸಾಮರ್ಥ್ಯ ಹೊಂದಿರುವ ಕೃಷ್ಣರಾಜ­ಸಾಗರವು ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಏಕೈಕ ಜಲಾಶಯ. ಇದು ಕಾವೇರಿ ನದಿಯ ಮೇಲ್ಭಾಗದಲ್ಲಿದ್ದು, ಜಲಾಶಯದ ಕೆಳಭಾಗದಲ್ಲಿ ನದಿಯು ತಮಿಳುನಾಡನ್ನು ಸೇರುವವರೆಗೆ ಯಾವುದೇ ಶೇಖರಣಾ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಕಾವೇರಿಯು ತಮಿಳುನಾಡನ್ನು ಸೇರುವ ಸುಮಾರು ೧೮೯ ಕಿ.ಮೀ.ವರೆಗೆ ಅನಿಯಂತ್ರಿತವಾಗಿ ಹರಿಯುತ್ತದೆ.

ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕರ್ನಾ­ಟಕದ ಯೋಜನೆ[ಬದಲಾಯಿಸಿ]
ಕೃಷ್ಣರಾಜ­ಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದ್ದು, ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ.
ಹೀಗಾಗಿ ಇಂತಹ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟುವಿನ ಮೇಲ್ಭಾಗದಲ್ಲಿ ಶೇಖರಣಾ ಜಲಾಶಯಗಳನ್ನು ನಿರ್ಮಿಸಲು ಕರ್ನಾಟಕ ಚಿಂತಿಸುತ್ತಿದೆ. ಇದರಿಂದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದ ಕೆಳಭಾಗದ ಅನಿಯಂತ್ರಿತ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ. ಆಗ ಮೇಲ್ಭಾಗದ ಜಲಾಶಯಗಳಾದ ಕೆ.ಆರ್.ಎಸ್., ಕಬಿನಿ, ಹೇಮಾವತಿ, ಹಾರಂಗಿಯಿಂದ ಬಿಡಬೇಕಾದ ನೀರನ್ನು ನಿಯಂತ್ರಿಸುವಲ್ಲಿ ಇರುವ ಒತ್ತಡವನ್ನು ಸಹ ಕಡಿಮೆ ಮಾಡಬಹುದಾಗಿದೆ.
ಬೆಂಗಳೂರಿನಿಂದ ಸುಮಾರು ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಇದರಿಂದ ಕೊಳವೆ ಬಾವಿಗಳು ಒಣಗಿಹೋಗಿವೆ. ೬೦೦ ಅಡಿ ಆಳದವರೆಗೆ ಕೊರೆದಿರುವ ಕೊಳವೆ ಬಾವಿಗಳಲ್ಲಿನ ನೀರು ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರು ನಗರದ ಜನಸಂಖ್ಯೆಯೂ ಬಹಳ ವೇಗವಾಗಿ ಏರುತ್ತಿದ್ದು, ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಮೇಕೆದಾಟುವಿನ ಬಳಿ ಸುಮಾರು ೪೫ ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ.
ಆದ್ದರಿಂದ ಕೆ.ಆರ್‌.ಎಸ್. ಅಣೆಕಟ್ಟಿನ ಕೆಳ ಪ್ರದೇಶದಿಂದ ರಾಜ್ಯದ ಗಡಿವರೆಗಿನ ಕಾವೇರಿ ನದಿಗೆ ಅಡ್ಡಲಾಗಿ ಸೂಕ್ತ ಸಾಮರ್ಥ್ಯದ ನೀರು ಶೇಖರಣಾ ಜಲಾಶಯಗಳನ್ನು ನಿರ್ಮಿಸಲು ಸ್ಥಳ ಗುರುತಿಸಿ, ನಕ್ಷೆ ಹಾಗೂ ವಿನ್ಯಾಸದೊಂದಿಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪರಿಣತರಿಗಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ಸರ್ಕಾರ ಜಾಗತಿಕ ಮಟ್ಟದಲ್ಲಿ ಆಹ್ವಾನ ನೀಡಿದೆ. ಯೋಜನಾ ವರದಿ ಸ್ವೀಕೃತವಾದ ನಂತರ, ಮುಂದಿನ ವಿಧಿವಿಧಾನಗಳು ಅಂತಿಮಗೊಳ್ಳಲಿವೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಾಪಿಸ­ಲಾಗಿದ್ದ ನ್ಯಾಯಮಂಡಳಿಯು 2007ರ ಫೆಬ್ರುವರಿ 5ರಂದು ನೀಡಿರುವ ಅಂತಿಮ ತೀರ್ಪಿನ ಅನ್ವಯ, ಎರಡೂ ರಾಜ್ಯಗಳಿಗೆ ಗಡಿಯಾಗಿರುವ ಬಿಳಿಗುಂಡ್ಲು­ವಿನಿಂದ ಕರ್ನಾಟಕವು ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು.ನಿಗದಿತ ಪ್ರಮಾಣದ ನೀರು ಬಿಟ್ಟ ನಂತರವೂ ಉಳಿಯುವ ಹೆಚ್ಚುವರಿ ನೀರನ್ನು ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯ­ಮಂಡಳಿ ಕೂಡ ತನ್ನ ತೀರ್ಪಿನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ, ಕಾವೇರಿ ಕಣಿವೆಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಕರ್ನಾಟಕ ಬಳಸಬಹುದು. ರಾಜ್ಯದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು 1990ರಿಂದಲೂ ಗಮನಿಸಿದರ;. ನಾಲ್ಕು ವರ್ಷಗಳನ್ನು ಬಿಟ್ಟು (2002, 2003, 2004 ಮತ್ತು 2012) ಉಳಿದೆಲ್ಲ ವರ್ಷಗಳಲ್ಲೂ 192 ಟಿಎಂಸಿ ಅಡಿಗಿಂತ ಹೆಚ್ಚು ನೀರನ್ನು ಅತ್ತ ಬಿಡಲಾಗಿದೆ. ವಾಸ್ತವವಾಗಿ ಶಿವನಸಮುದ್ರ ನಂತರ ಕಾವೇರಿ ಕಣಿವೆಯಲ್ಲಿ 192 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿಯುತ್ತದೆ.
ಅಂದಾಜಿನ ಪ್ರಕಾರ, ಸರಾಸರಿ 60ರಿಂದ 70 ಟಿಎಂಸಿ ಅಡಿ ಕಾವೇರಿ ನೀರು ಸಮುದ್ರ ಸೇರುತ್ತದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಟ್ಟು, ವೃಥಾ ಪೋಲಾಗುವ ಉಳಿಕೆ ನೀರನ್ನು ಮೇಕೆ­ದಾಟು­­ವಿನಲ್ಲಿ ಸಂಗ್ರಹಿಸಿ ಕುಡಿಯುವ ನೀರಿಗೂ, ವಿದ್ಯುತ್‌ ಉತ್ಪಾದನೆಗೂ ಬಳಸುವುದು ಸರ್ಕಾರದ ಯೋಚನೆ. ಅಂದಾಜು 45ರಿಂದ 50 ಟಿಎಂಸಿ ಅಡಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಸುಮಾರು 500 ಮೆ.ವಾ. ವಿದ್ಯುತ್‌ ಉತ್ಪಾದನೆಯನ್ನೂ ಮಾಡಬಹುದು.
ಮೇಕೆದಾಟು ಪ್ರದೇಶದಲ್ಲಿ ಎಷ್ಟು ಅಣೆಕಟ್ಟು ನಿರ್ಮಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು. ಅರಣ್ಯ, ಪರಿಸರ ಸೇರಿದಂತೆ ವಿವಿಧ ಇಲಾಖೆಗಳು ಅನುಮತಿ ನೀಡಬೇಕು. ಇದಕ್ಕೆಲ್ಲ ಒಂದು ವರ್ಷ ಹಿಡಿಯ­ಬಹುದು. ಆದಷ್ಟು ಬೇಗ ಈ ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಅಪೇಕ್ಷೆ.
ಬೆಂಗಳೂರಿಗೆ 25 ಟಿಎಂಸಿ ಅಡಿ ನೀರು: ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಹೇಮಾವತಿ ಜಲಾಶಯದಿಂದ 25 ಟಿಎಂಸಿ ಅಡಿ ನೀರನ್ನು ಹೆಚ್ಚು ಶ್ರಮಪಡದೆ ಬೆಂಗಳೂರು ನಗರಕ್ಕೆ ತರಬಹುದು!

ಸದ್ಯ ಹೇಮಾವತಿ ಜಲಾಶಯದಿಂದ 20ರಿಂದ 25 ಟಿಎಂಸಿ ಅಡಿ ನೀರನ್ನು ಕೆ.ಆರ್.ಎಸ್‌.ಗೆ ಹರಿಸಲಾಗುತ್ತಿದೆ. ಒಂದು ವೇಳೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿದರೆ, ಕಬಿನಿ, ಹಾರಂಗಿ ಮತ್ತು ಕೆಆರ್‌ಎಸ್‌ ಅಣೆಕಟ್ಟುಗಳಿಂದಲೇ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬಹುದು. ಹೇಮಾವತಿ ನೀರನ್ನು ತುಮಕೂರಿನಿಂದ 22 ಕಿ.ಮೀ ದೂರದಲ್ಲಿರುವ ಶಿವಗಂಗೆಗೆ ತಂದು ಅಲ್ಲಿಂದ ಒಂದು ಕಾಲದಲ್ಲಿ ಬೆಂಗಳೂರಿನ ನೀರಿನ ಮೂಲವಾಗಿದ್ದ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಕೆರೆಗಳಿಗೆ ಹರಿಸಬಹುದು. ಇದರಿಂದಾಗಿ ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ದಾಹ ತಣಿಸಬಹುದು.

ತಮಿಳುನಾಡಿಗೂ ಪ್ರಯೋಜನ: ಈ ಯೋಜನೆಯಿಂದ ತಮಿಳು­ನಾಡಿಗೂ ಲಾಭವಿದೆ. ಅಣೆಕಟ್ಟೆಯಲ್ಲಿ ಸಂಗ್ರಹ­ವಾಗುವ ನೀರನ್ನು ಕಾಲಕ್ಕೆ ತಕ್ಕಂತೆ ನೆರೆಯ ರಾಜ್ಯಕ್ಕೆ ಬಿಡಬಹುದು. ಒಂದು ವೇಳೆ ನಾವು ಅಲ್ಲಿ ಜಲ ವಿದ್ಯುತ್‌ ಯೋಜನೆ ಕೈಗೆತ್ತಿ­ಕೊಂಡರೆ, ವಿದ್ಯುತ್‌ ಉತ್ಪಾದನೆಯ ನಂತರದ ನೀರು ಸಹಜವಾಗಿ ತಮಿಳುನಾಡಿಗೆ ಹರಿಯುತ್ತದೆ. ಹಾಗಾಗಿ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಆದರೆ, ಕ್ಯಾತೆ ತೆಗೆಯುವುದನ್ನೇ ಚಾಳಿಯನ್ನಾಗಿಸಿಕೊಂಡಿರುವ ತಮಿಳು­ನಾಡು ಈ ಯೋಜನೆಯ ವಿರುದ್ಧವೂ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ಯೋಜನೆಯಿಂದ ತನ್ನ ಹಿತಾಸಕ್ತಿಗೆ ಧಕ್ಕೆ ಇಲ್ಲ ಎಂಬುದು ಗೊತ್ತಿದ್ದರೂ ಅದು ವಿರೋಧಿಸುತ್ತಿರುವುದು ದುರದೃಷ್ಟಕರ. ಬ್ರಿಟಿಷರ ಕಾಲದಿಂದಲೂ ತಮಿಳುನಾಡು ಕಾವೇರಿ ವಿಚಾರದಲ್ಲಿ ತಕರಾರು ತೆಗೆಯುತ್ತಿದೆ. ತನಗೆ ನೀರಿಲ್ಲ, ರೈತರಿಗೆ ಕಷ್ಟವಾಗು­ತ್ತದೆ ಎಂದು ಅದು ಕಣ್ಣೀರು ಸುರಿಸುತ್ತಿದ್ದರೂ, ಅಲ್ಲಿನ ರೈತರು ಪ್ರತಿ ವರ್ಷ ಎರಡು – ಮೂರು ಬೆಳೆ ಬೆಳೆಯುತ್ತಾರೆ.

ಆದರೆ ಈ ಯೋಜನೆ ವಿಚಾರದಲ್ಲಿ ಕಾನೂನು ನಮ್ಮ ಪರವಾಗಿ ಇದೆ. ತಮಿಳುನಾಡು ಸುಪ್ರೀಂ­-ಕೋರ್ಟ್‌ಗೆ ಹೋಗಿದೆ,ಕರ್ನಾಟಕವೂ ಹೋಗಿದೆ.

ಈ ಯೋಜನೆಗಳಿಂದ ಆಗುವ 4 ಪ್ರಮುಖ ಲಾಭಗಳು :
ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್‌ ಉತ್ಪಾದನೆ
ಬೆಂಗಳೂರಿನ ಬಳಕೆಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹ
ಕೆ.ಆರ್.ಎಸ್‌, ಕಬಿನಿ ಅಣೆಕಟ್ಟೆಗಳಿಂದ ಹರಿಯುವ ಹೆಚ್ಚುವರಿ ನೀರಿನ ಸಂಗ್ರಹ
ವಿದ್ಯುತ್‌ ಉತ್ಪಾದನೆ ಜೊತೆಗೆ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನ್ವಯ ತಮಿಳುನಾಡಿಗೆ ಹರಿಸಬೇಕಾದ ನೀರಿನ ಕೊರತೆಯೂ ಆಗದ,ಹೆಚ್ಚೂ ಆಗದ ನಿಯಂತ್ರಣ.

ಕೃಪೆ : ವಿಕಿಪೀಡಿಯಾ