ಬುಧವಾರ, ಆಗಸ್ಟ್ 10, 2016

ಎತ್ತ ಸಾಗಿದೆ ನಮ್ಮ ನಾಡು

ಎತ್ತ ಸಾಗಿದೆ ನಮ್ಮ ನಾಡು

ಚೆಲುವ ಕನ್ನಡ ನಾಡು

ಎತ್ತೆತ್ತಲೋ ಸಾಗಿದೆ ಭವ್ಯ ಬೀಡು |

ಚಿತ್ತ ಹರಿಸುವವರಿಲ್ಲ; ಇತ್ತ ಸುಳಿವೂ ಇಲ್ಲ

ಬೆಟ್ಟಗುಡ್ಡ, ನದಿ, ಅಡವಿ ಭರಿದು ಮಾಡಿದರೆಲ್ಲ

ಇಂಚಿಂಚೂ ಬಿಡದೆ ನುಂಗುವರಲ್ಲ

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ವಾಯುವ್ಯಕೆ ಗೋವಾ; ಉತ್ತರದಿ ಮಹಾರಾಷ್ಟ್ರ

ಪೂರ್ವದಲಿ ಆಂಧ್ರ; ದಕ್ಷಿಣಕೆ ಕೇರಳ-ತಮಿಳುನಾಡು

ಚಿಂತೆಯಿಲ್ಲ ಸುತ್ತುವರೆದರೂ ಇಂತಿಪ್ಪ ಅನ್ಯರು |

ಚಿಂತೆಯೊಂದೆ.. ನಮಗೀಗ ನಮ್ಮೊಳಗೆ ನಮ್ಮವರು

ನುಂಗುವರು ಎಲ್ಲವನೂ ಬಾಕಸೂರರಂತೆ

ಒಂದಗುಳು ಬಿಡದೆ ಬಡಿದು ಬಾಯಿಗೆ ಹಾಕಿಕೊಂಡು

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ಹೋರಾಡುವರು ಕಿರುಚಾಡುವರು

ಗಡಿ ರಾಜ್ಯದಿ ಊರುಗಳೆಲ್ಲಾ ನಮಗೆ ಸೇರಬೇಕೆಂದೆನುತ

ನಾಡನು ರಕ್ಷಿಸಲೆಂದು ಸಂ ಕಟ್ಟಿ ನಿಂತವರು |

ಇತ್ತ ಗಮನಿಸುವುದಿಲ್ಲ ರೈತರ, ಬಡವರ

ಭೂಮಿ ಕಿತ್ತು ನುಂಗುವರನ್ನ.. ಏಕೆಂದರೆ

ನುಂಗುವರು ನಮ್ಮವರು ತಾನೇ? ಅಣ್ಣ-ತಮ್ಮಂದಿರು

ಎತ್ತ ಸಾಗಿದೆ ನಾ ಕಾಣೆ... ನನ್ನವ್ವನ ಆಣೆ ||

 

ಹೋರಾಡಿದರು ಆಗಿನವರು ಏಕೀಕರಣಕೆ

ಕರ್ನಾಟಕ ಒಂದುಗೂಡಲೆಂದು

ಹೋರಾಡುವರು ಈಗಿನವರು ವರ್ಗೀಕರಣಕೆ

ಕರ್ನಾಟಕ ಯಾವುದೆಂದು |

ಸುಮ್ಮನೆ ಸತ್ತಂತಿರುವವರು ಪ್ರಜಾಪಾಲಕರು

ಯಾಕಪ್ಪಾ ಬೇಕು? ನಾಡಿನ ಚಿಂತೆ

ಬೇಕೊಂದೆ ಅವರುಗಳಿಗೆ ಅಸೆಂಬ್ಲಿ ಸಂತೆ

ಎತ್ತ ಸಾಗಿದೆ ನಾ ಕಾಣೆ.. ನನ್ನವ್ವನ ಆಣೆ ||

 

ದೋಚುತಿರುವರು ನಾಡನು ಕೊಳ್ಳೆ ಹೊಡೆದು

ಇವರ ದಾಹ ತಣಿಯುವುದಿಲ್ಲ

ತಿದ್ದುವರಿಲ್ಲ; ಚಾಟಿಯ ಬೀಸುವವರಿಲ್ಲ |

ಲೇಖನಿಲಿ ಚುಚ್ಚಿ ಕೊಲೆಗೈಯಬೇಕು ಇಂಥವರನು

ಅದಕ್ಕಾಗಿ ಮತ್ತೊಮ್ಮೆ ಹುಟ್ಟಿಬರಬೇಕು

ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ ಮಾಸ್ತರರು

ಎತ್ತ ಸಾಗಿದೆ ಅವ್ವ ಭುವನಮಾತೆ.. ನೀನೆಲ್ಲಿರುವೆಯೋ ನಾ ಕಾಣೆ ||

ರಚನೆ : ಅವಿನಾಶ್ (ಅವಿಕನ್ನಡಿಗ)

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ