ಮಂಗಳವಾರ, ಆಗಸ್ಟ್ 9, 2016

ರಕ್ಷಿಸುವ ಕಸವ ಲಕ್ಷ್ಯಿಸುವವರಾರು?



ಉಪಯೋಗಿಸಿ ಬಿಸಾಡುವ ಮುನ್ನ
ತಿಂದುಳಿಸುವ ಬೇಡದ ಶೇಷವನ್ನ
ಬೆಲೆ ಕೊಡುವರು.. ಇವೆಲ್ಲಕೂ ಮುನ್ನ;
ಇದು ಹೊಸತ? ತಾಜಾವುಂಟಾ?
ಬಿಸಿ ಇಲ್ಲವಾ? ರುಚಿ ಇದೆಯಾ?
ಬೇರೆ ಬಣ್ಣವಿಲ್ಲವಾ? ಎಂದು.

ನಿನ್ನ ಬಗ್ಗೆ ಕಾಳಜಿಯೊ, ಜಾಗೃತವೋ ನಾ ಕಾಣೆ!
ಆದರೆ.. ನೀ ಉಪಯೋಗವಾದ ನಂತರ;
ಯಾರು ನೆನೆಯುವರು ನಿನ್ನ? ಕ್ಷಣಾರ್ಧದಲಿ
ನೀ ಬರೀ ಕೊಳಕು, ಅಸಹ್ಯ.
ನಿನ್ನ ಮುಟ್ಟಿದರೆ ತೊಳೆದುಕೊಳ್ಳುವರು
ತಮ್ಮ ಮೈ-ಕೈಗಳನ್ನ.
ನಿನ್ನ ಕಂಡರೆ ಮೂಗು ಮುಚ್ಚುವರು
ಗಬ್ಬುನಾಥ! ಎಂದು ಬೈದುಕೊಂಡು.
ನಿನ್ನ ರೂಪಕೆ, ರುಚಿಗೆ ಹೊಗಳಿದರು
ನೀ ಹಾಳಾಗುವ ಮುನ್ನ.
ಉಗುಳಿದರು ಕ್ಯಾಕರಿಸಿ ತುಪಕ್ಕನೆಂದು
ನೀ ಬೇಡವೆಂದು ದೂಡಿದ ಮೇಲೆ.
ಜೋಪಾನ ಮಾಡುವರು ತಮ್ಮ ಮಗುವನು
ಸಂತೈಸಿ ಹಾರೈಸಿದಂತೆ... ನಿನ್ನ ತಿಂದು ಉಡುವ ಮುನ್ನ.
ಉಟ್ಟು ತಿಂದಾದಮೇಲೆ ನೀನ್ಯಾರಿಗೆ ಬೇಕೇಳು?
ಪುಟ್ಟಿಯಲಿ ಬಂದ ನೀನು, ಕೊನೆಗೆ
ಬೀಳುವೆ ರಸ್ತೆ ಬದಿಯ ತೊಟ್ಟಿಯಲಿ!

ನೀ ಬಂದರೆ ನಾವೆಲ್ಲಾ ನಶಿಸುತ್ತೇವೆ,
ನಿನಗುಳಿದುಕೊಳ್ಳಲು ಅಲ್ಪಜಾಗವೂ ಬಿಡೇವೆಂದು;
ಸೀಮೆಣ್ಣೆ ಸುರಿದುಕೊಂಡು ವಿಷವ ಕುಡಿದು
ಪ್ರತಿಭಟಿಸುವರು ನಿನ್ನ ಬರುವಿಕೆಗೆ ಪಟ್ಟಣದ ಪಕ್ಕದ ಜನ.
ನಿನ್ನ ಇರುವಿಕೆಯೆ ದೊಡ್ಡ ಸಮಸ್ಯೆ
ಬೃಹತ್ ಮಹಾನಗರ ಪಾಲಿಕೆಗೆ!
ದಿನ ನಿತ್ಯ ಸದನದಲಿ ನಿನ್ನದೇ ಮಾತು;
ಆರೋಪ ಪ್ರತ್ಯಾರೋಪ ಆಡಳಿತ ವಿರೋಧ ಪಕ್ಷಗಳ ಮಧ್ಯೆ
ನಿನ್ನಯ ನಿರ್ವಹಣೆಯೆ ಇವರ ಕಚ್ಚಾಟಕ್ಕೆ ದಾರಿ.

ತಿಂದೊಗೆದ ಮನುಜ ನಿನಗೆ ಇಷ್ಟೆಲ್ಲಾ
ನೋವು ನಿಂದನೆಯನು ಕೊಟ್ಟರೂ
ಒಂದನಿಯ ಕಣ್ಣೀರು ಸುರಿಸದೆ ಪ್ರತಿಫಲವಾಗಿ ನೀ ನಮಗೆ
ಗೊಬ್ಬರವಾದೆ, ಇಂಧನವಾದೆ, ಇನ್ನೂ ಕೆಲವೆಡೆ ಚಳಿಗೆ
ಬೆಚ್ಚಗೆನೆಯ ಬೆಂಕಿಯಾದೆ. ಬೀದಿಯಲಿ ಹಾಯುವ ಬಡವರಿಗೆ
ಬದುಕುವ ದಾರಿಯಾದೆ.
ಸಣ್ಣ ಕೈಗಾರಿಕೆಗಳಿಗೆ ಕೆಲಸ ನೀಡುವ ಕಚ್ಚಾಸಾಮಗ್ರಿಯಾದೆ!!
ನನ್ನದೊಂದು ವಿನಮ್ರತೆಯ ಮನವಿ ಕೊನೆಯದಾಗಿ
ಪರರ ಸುಖದೊಳಗೆ ಆನಂದ ಪಡುವ
ನಿನ್ನ ಸತ್ಫಲವ ನೆನಯಲಿ;
ಬಯ್ಯುವರು, ಉಗುಳುವವರು ಮೊದಲು ತಿಳಿದುಕೊಳ್ಳಲಿ-

ಜಾಣ್ಮೆಯಲಿ ಉಪಯೋಗಿಸುವುದು ಹೇಗೆ ನಿನ್ನ?

ರಚನೆ : ಅವಿನಾಶ್‍ (ಅವಿಕನ್ನಡಿಗ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ