ಬುಧವಾರ, ಆಗಸ್ಟ್ 10, 2016

ನನ್ನವ್ವನ ಲಾಲಿ ಹಾಡು


ಸೀರೆಯ ಜೋಳಿಗೆ ಕಟ್ಟಿ

ಮೆಲ್ಲನೆ ಎದೆಯ ತಟ್ಟಿ

ಲೋ... ಲೋ.. ಲಾಯಿ ಎಂದು

ಜಗವೇ ತೂಗೋ ಹಾಗೆ ಮೆಲ್ಲಗೆ ಪದವ ಹಾಡಿ

ಕದ್ದೊಯ್ದಳು ನನ್ನವ್ವ ನಿದ್ದೆಗೆ...

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಕಾಲೆರಡು ಮುಂದೆ ಚಾಚಿ

ನನ್ನೆದೆಯ ಪೂರ್ತಿ ಬಾಚಿ

ಅಂಗಾತ ಮಲಗಿಸಿ ಬೆಚ್ಚಗೆಯ ನೀರು ಹೋಯ್ದು

ಮೆತ್ತಗೆ ಬೆರಳ ಹಾಕಿ ಗಂಟಲ ಕಫವ ಕಿತ್ತು

ಸಾಮ್ರಾಣಿ ಹೊಗೆ ಬುಟ್ಟಿಗೆ ಹಾಕಿ

ಎನ್ನ ಮೈಯ ಮೆತ್ತಗೆ ಸೋಕಿ

ಲೋ.. ಲೋ.. ಲಾಯಿ ಎಂದು

ಗುಮ್ಮಣ್ಣ ಬಂದು ನಿನ್ನ ಹೊತ್ತುಕೊಂಡೋದಾನೊ

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಗಲ್ಲಕ್ಕೊಂದು ಹಣೆಗೊಂದು

ಕಪ್ಪನೆಯ ಕಾಡಿಗೆ ಇಟ್ಟು

ನೆತ್ತಿಗೆ ಹೊಕ್ಕಳಿಗೆ ಹಳ್ಳೆಣ್ಣೆ ತೊಟ್ಟು ಸುರಿದು

ತನ್ನೆರಡು ಕೈ ಮೇಲಕೆ ಎತ್ತಿ

ಅಡಿಯಿಂದ ಮುಡಿಯ ಸವರಿ

ಊರೋರ ಕೆಟ್ಟ ಕಣ್ಣು ತಾಗದಿರಲಿ ನಿನಗೆ ಎಂದು

ಲೊಟ ಲೊಟನೆ ನೊಟಕೆ ಮುರಿದು

ನನ್ನಪ್ಪಂಗೆ ನಂದೆ ದೃಷ್ಟಿ ತಾಕಿತೋ..

ತೋ ಬಿಡ್ತು ಅನ್ನು

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...

 

ಊರ್ಸುತ್ತಾ ಕೂಲಿಯ ಮಾಡಿ

ನಾಕಾಸು ಹಣವ ಕೂಡಿ

ಗಂಜಿಗೆ ಬರ ಬಾರದಂತೆ ನೋಡಿ

ಹಬ್ಬಕೆ ಜಾತ್ರೇಲಿ ಹೊಸಬಟ್ಟೆ ತೊಡಿಸಿ

ಒಬ್ಬಟ್ಟು ಊರ್ಣ ತಿನಿಸಿ

ತನ್ನೊಟ್ಟೆಯ ಕಟ್ಟಿ ನನ್ನ ಖುಷಿಯ ನೋಡಿ

ತಾನಾನಂದವ ಪಟ್ಟಿ, ನೂರೊಂದು ಕನಸು ಕಟ್ಟಿ

ನಾನೊಂದು ಬಿಕ್ಷೆ ಬೇಡುವೆ ನಿನ್ನಲಿ

ನೀನೊಬ್ಬ ದೊಡ್ಡ ಮನುಷ್ಯನಾಗು

ಸಾಕೆನೆಗೆ ಸಾರ್ಥಕ ಬದುಕು ನಂದೆನುತ

ಜೋ... ಜೋ... ಜೋ... ಜೋ..

ಲಾಲಿ.. ಜೋ.. ಜೋ...


ರಚನೆ : ಅವಿನಾಶ್ (ಅವಿಕನ್ನಡಿಗ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ